Tuesday, 31 March 2026

ಯಕ್ಷ ಸಾಹಿತ್ಯ ಸಾಂಗತ್ಯ - ಪುಸ್ತಕ ಲೋಕಾರ್ಪಣೆ

ಮಾರ್ಚ್ 30 - 2026 ಯಕ್ಷಗಾನ ಪ್ರಸಂಗ ಕೃತಿಗಳು ರಂಗ ಪ್ರದರ್ಶನಕ್ಕೆ ಸೀಮಿತವಾದ ಪಠ್ಯಗಳೆಂಬ ಭಾವನೆಯಿಂದ ಶಿಷ್ಟ ಸಾಹಿತ್ಯ ಸಾಹಿತಿಗಳು, ಕವಿಗಳು, ವಿಮರ್ಶಕರು ಯಕ್ಷಗಾನ ಸಾಹಿತ್ಯವನ್ನು, ಕವಿಗಳನ್ನು ಕಡೆಗಣಿಸಿದ್ದಾರೆ ಎಂಬ ಮಾತು ಹಲವು ವರ್ಷಗಳಿಂದ ಯಕ್ಷಗಾನ ವಲಯದಲ್ಲಿ ಕೇಳಿಬರುತ್ತಿದೆ.
ಯಕ್ಷಗಾನ ಪ್ರಭಾವ ಹೊಂದಿರುವ ಕರಾವಳಿ ಮತ್ತು ಮಲೆನಾಡಿನ ಪ್ರದೇಶ ಹೊರತು ಪಡಿಸಿ ಕರ್ನಾಟಕದ ಉಳಿದ ಪ್ರದೇಶಗಳ ವಿದ್ವಾಂಸರು ಕೂಡ ಯಕ್ಷಗಾನ ಸಾಹಿತ್ಯದ ಪರಿಚಯ ಹೊಂದಿಲ್ಲ ಎನ್ನುವುದು ಕೂಡ ಸತ್ಯವಾದ ವಿಷಯ.
ಈ ವಿಷಯಗಳನ್ನು ಮನಗಂಡ ಬೆಂಗಳೂರಿನ ಯಕ್ಷವಾಹಿನಿ ರವಿ ಮಡೋಡಿಯವರ ಕಲ್ಪನೆಯ ಡಾ ಆನಂದರಾಮ ಉಪಾಧ್ಯರ ಸಮನ್ವಯದಲ್ಲಿ 'ಯಕ್ಷಸಾಹಿತ್ಯ ಸಾಂಗತ್ಯ' ಎಂಬ ವಿನೂತನ ಕಾರ್ಯಕ್ರಮವನ್ನು ಸಂಯೋಜಿಸಿತು.
ಕನ್ನಡದ ಹಿರಿಯ ವಿದ್ವಾಂಸರು, ಸಾಹಿತಿಗಳು, ಕವಿಗಳು, ವಿಮರ್ಶಕರು ಮೊದಲಾದವರನ್ನು ಸಂಪರ್ಕಿಸಿ ಅವರಿಗೆ ಒಂದು ಯಕ್ಷಗಾನ ಪ್ರಸಂಗದ ಪ್ರತಿ ನೀಡಿ ಅದರ ಸಾಹಿತ್ಯಕ ವಿಮರ್ಶೆ ಮಾಡಿ ಉಪನ್ಯಾಸ ನೀಡುವಂತೆ ಆಹ್ವಾನಿಸಲಾಯಿತು. 2021 ರಿಂದ 2025 ರವರೆಗೆ ನಾಲ್ಕುವರ್ಷಗಳ ಕಾಲ ನಡೆದ ಸರಣಿ ಆನ್ಲೈನ್ ಕಾರ್ಯಕ್ರಮದಲ್ಲಿ ಇಪ್ಪತ್ತೈದು ಜನ ಶಿಷ್ಟ ಸಾಹಿತ್ಯದ ಗಣ್ಯರು ಭಾಗವಹಿಸಿ ಯಕ್ಷಗಾನ ಪ್ರಸಂಗ ಕೃತಿಗಳನ್ನು ವಿಮರ್ಶಿಸಿ ಉಪನ್ಯಾಸ ನೀಡಿದರು.
ನಾಡೋಜ ಹಂಪ ನಾಗರಾಜಯ್ಯನವರು ನಾಡಿನ ಪ್ರಸಿದ್ಧ ವಿದ್ವಾ೦ಸರು, ಸಂಶೋಧಕರು. ಅಂತೆಯೇ ಡಾ ಕೆ.ಆರ್ ಲಕ್ಷ್ಮಿನಾರಾಯಣ, ಡಾ ಕೆ ಆರ್ ಗಣೇಶ, ಶ್ರೀಧರಮೂರ್ತಿ ಎನ್ ಎಸ್, ಡಾ ವೆಂಕಟಗಿರಿ ದಳವಾಯಿ, ಪ್ರೊ ಟಿ ಎಸ್ ರಘುನಾಥ್, ಗಣೇಶ ಭಟ್ ಕೊಪ್ಪಲತೋಟ ಮುಂತಾದ ಖ್ಯಾತ ವಿದ್ವಾ೦ಸರು. ಪ್ರಸಿದ್ಧ ಕವಿಗಳಾಗಿರುವ ಬಿ ಆರ್ ಲಕ್ಷ್ಮಣ ರಾವ್, ಡುಂಡಿರಾಜ್, ಟಿ ಎಲ್ಲಪ್ಪ, ಶ್ರೀಧರ ಡಿ ಎಸ್, ಪ್ರಸಿದ್ಧ ಕತೆಗಾರರಾಗಿರುವ ಕೆ ಸತ್ಯನಾರಾಯಣ, ಎಸ್ ದಿವಾಕರ್, ಪ್ರೊ ಪ್ರೇಮ ಶೇಖರ, ಕೇಶವ ಮಳಗಿ, ರಾಜಶೇಖರ ಹಳೆಮನೆ, ರಾಘವೇಂದ್ರ ಪಾಟೀಲ, ಜೋಗಿ, ವಿಮರ್ಶಕರ ವಲಯದ ಡಾ ನರಹಳ್ಳಿ ಬಾಲಸುಬ್ರಮಣ್ಯ, ಎಸ್ ಆರ್ ವಿಜಯಶಂಕರ, ಡಾ ಎಚ್ ದಂಡಪ್ಪ, ಡಾ ಎಚ್ ಎಸ್ ಸತ್ಯನಾರಾಯಣ, ಡಾ ಭೈರಮಂಗಲ ರಾಮೇಗೌಡ ಹಾಗೂ ರಂಗತಜ್ಞ ಆಗಿರುವ ಡಾ ಬಿ ವಿ ರಾಜಾರಾಮ್, ಹಾಸ್ಯ ಸಾಹಿತಿಗಳಾದ ಎಚ್ ,ಎಂ ಎಸ್ ನರಸಿಂಹಮೂರ್ತಿ ಮೊದಲಾದವರು ಇಲ್ಲಿ ಪ್ರಸಂಗಾವಲೋಕನ ಮಾಡಿದ್ದಾರೆ.
ಈ ಕಾರ್ಯಕ್ರಮಗಳಿಗೆ ಯಕ್ಷಗಾನ ಆಸಕ್ತರು ಸ್ಪಂದಿಸಿದ ಬಗೆ ಅವಿಸ್ಮರಣೀಯ. ನಾಡಿನ ಹೊರಗಿರುವ ಕೆನಡಾದ ಟೊರೊಂಟೊದಿಂದ, ಅಮೇರಿಕಾದ ಕ್ಯಾಲಿಪೋರ್ನಿಯಾದಿಂದ, ಸಿಂಗಾಪುರದಿಂದ, ದುಬೈನಿಂದ, ಅಬುಧಾಬಿಯಿಂದ ಮುಂಬಯಿಯಿಂದ, ಕರ್ನಾಟಕದ ಒಳಗೆ ಮಂಗಳೂರು, ಉಡುಪಿ, ಶಿರಸಿ, ಮೈಸೂರು, ಸಾಗರ ಧಾರವಾಡ ಮುಂತಾದ ಕಡೆಯಿಂದ ಝುಮ್ ನಲ್ಲಿ ಸೇರಿಕೊಂಡು ಕಾರ್ಯಕ್ರಮದ ಯಶಸ್ಸಿನಲ್ಲಿ ಕಲಾವಿದರು, ಯಕ್ಷಗಾನ ಸಾಹಿತಿಗಳು, ಅಭಿಮಾನಿಗಳು ಭಾಗಿಯಾದರು. ಚರ್ಚೆಯ ನಡುವೆ ಎಷ್ಟೊ ಹೊಸವಿಚಾರಗಳು ಉದ್ಭವಿಸುತ್ತಿದ್ದವು. ಉಪನ್ಯಾಸಕರು ಯಕ್ಷಗಾನ ವಲಯದವರಲ್ಲವಾದರೂ ಈ ಕಲೆಯ ಅಂತರ್ಗತ ಶಕ್ತಿಯ ಕುರಿತಾದ ಅವರ ಚಿಂತನೆ ಮೌಲ್ಯಯುತವಾದದ್ದು 'ಮಾತುಮಾತು ಮಥಿಸಿ ಬಂದ ನಾದದ ನವನೀತ' ದಂತೆ ಹೊಸ ವಿಚಾರಗಳು, ಪ್ರಮೇಯಗಳು ಅಲ್ಲಿ ಹುಟ್ಟಿದವು.
ಉಪನ್ಯಾಸಕರ ವೈಯಕ್ತಿಕ ವರ್ಚಸ್ಸಿನಿಂದ ಯಕ್ಷಗಾನ ವಲಯದ ಹೊರಗಿರುವ ಸಾಹಿತ್ಯಾಸಕ್ತರಿಗೆ ಕೂಡ ಯಕ್ಷಗಾನ ಸಾಹಿತ್ಯದ ಪರಿಚಯವಾಗುವಂತಾಯಿತು. ಯಕ್ಷ ಸಾಹಿತ್ಯ ಕೇವಲ ರಂಗ ಸಾಹಿತ್ಯವಲ್ಲ, ಅದರಲ್ಲಿ ಶಿಷ್ಟ ಸಾಹಿತ್ಯದ ಸಾಕಷ್ಟು ಅಂಶಗಳಿವೆ ಎಂಬುದು 'ನವನೀತ'ದಂತೆ ಹೊರಬಂದ ವಿಚಾರವಾಗಿದೆ. ಜಾನಪದ ಪ್ರಜ್ಞೆ ಹಾಗೂ ಪುರಾಣ ಪ್ರಜ್ಞೆಗಳೆರಡರ ಕಸಿಕಟ್ಟುವ ಕಾರ್ಯ ಪ್ರಸಂಗ ಸಾಹಿತ್ಯದಲ್ಲಿ ಕಂಡು ಬರುತ್ತದೆ ಎಂಬ ಸಂಗತಿ ಕೂಡ ಕಾರ್ಯಕ್ರಮದಿಂದ ಮೂಡಿಬಂದ ವಿಚಾರವಾಗಿದೆ. ಪುರಾಣ ಹಾಗೂ ಸಮಕಾಲೀನ ಸಮನ್ವಯವೇ ಯಕ್ಷಗಾನ ಸಾಹಿತ್ಯದ ಉಸಿರಾಗಿದ್ದರಿಂದಲೇ ಇಂದು ಕೂಡ ಯಕ್ಷಗಾನ ಹಾಗೂ ಅದರ ಸಾಹಿತ್ಯ ಉಳಿದುಕೊಂಡು ಬಂದಿದೆ ಎಂಬ ವಿಚಾರ ತಿಳಿದದ್ದು ಕೂಡ 'ಯಕ್ಷಸಾಹಿತ್ಯ ಸಾಂಗತ್ಯ'ದ ಫಲವಾಗಿದೆ.
ಯಕ್ಷವಾಹಿನಿಯ ಈ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮದ ಎಲ್ಲ ಇಪ್ಪತ್ತೈದು ಉಪನ್ಯಾಸಗಳು ಸಂಕಲನಗೊಂಡು ಕೃತಿ ರೂಪದಲ್ಲಿ ಬರುತ್ತಿದೆ. ಡಾ ಆನಂದರಾಮ ಉಪಾಧ್ಯ ಹಾಗೂ ಉಮೇಶ ಶಿರೂರು ಇವರ ಸಂಪಾದಕತ್ವದ ಈ ಪುಸ್ತಕವನ್ನು ಬೆಂಗಳೂರಿನ ಸಾಹಿತ್ಯಲೋಕ ಪಬ್ಲಿಕೇಷನ್ ಇವರು ಪ್ರಕಟಿಸುತ್ತಿದ್ದಾರೆ.
ಸಹೃದಯ ಓದುಗರು ಇದನ್ನು ಸ್ವೀಕರಿಸಿದರೆ ನಮ್ಮ ಶ್ರಮ ಸಾರ್ಥಕ
- ಯಕ್ಷವಾಹಿನಿ ಬೆಂಗಳೂರು






No comments:

Post a Comment